ಉದ್ಭೂತರೂಪ: ಚಕ್ಷು(ಕಣ್ಣು) ಇಂದ್ರಿಯದಿಂದ ಉಂಟಾಗುವ ಪ್ರತ್ಯಕ್ಷಕ್ಕೆ ಗೋಚರವಾಗುವ ರೂಪ. ಉದ್ಭೂತ ಎಂದರೆ ಮೇಲೆದ್ದು ವ್ಯಕ್ತವಾಗಿರುವುದು ಎಂದರ್ಥ. ರೂಪ ಚಕ್ಷುರಿಂದ್ರಿಯದಿಂದ ಗ್ರಹಿಸಲ್ಪಡುವ ಗುಣ. ಚಾಕ್ಷುಷ ಪ್ರತ್ಯಕ್ಷವಾಗಬೇಕಾದರೆ ಆಲೋಕ ಸಂಯೋಗ (ಬೆಳಕಿನ ಸಂಬಂಧ) ಮತ್ತು ಉದ್ಭೂತರೂಪ ಇವೆರಡೂ ಇದ್ದೇ ಇರಬೇಕು. ಆದುದರಿಂದಲೇ
ಕ್ರಿಯಾಂ ಜಾತಿಂ ಯೋಗ್ಯವೃತ್ತಿಂ ಸಮವಾಯಂ ಚ ತಾದೃಶಮ್
ಗೃಹ್ಣಾತಿ ಚಕ್ಷುಃ ಸಂಬಂಧಾದಾಲೋಕೋದ್ಭೂತರೂಪಯೋಃ
ಎಂದು ಭಾಷಾಪರಿಚ್ಛೇದದಲ್ಲಿ ಹೇಳಿದೆ. 
ಕಣ್ಣಿಗೆ ಗೋಚರವಾಗುವ ದ್ರವ್ಯ (ವಸ್ತು)ದಲ್ಲಿರುವ ಗಮನ ಮೊದಲಾದ ಕ್ರಿಯೆ, ಘಟತ್ವ ಮೊದಲಾದ ಜಾತಿ, ಸಮುದಾಯ ಸಂಬಂಧ ಇವುಗಳನ್ನು ಆಲೋಕ (ಬೆಳಕು) ಮತ್ತು ಉದ್ಭೂತರೂಪಗಳ ಸಂಬಂಧದಿಂದ ಚಕ್ಷುರಿಂದ್ರಿಯ ಗ್ರಹಿಸುತ್ತದೆ, ಅಂದರೆ ಸಾಕ್ಷಾತ್ಕರಿಸುತ್ತದೆ.	(ಎಸ್.ಎಸ್.ಎಚ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ